
ಬಿ.ಸಿ.ರೋಡು: ಶಿಕ್ಷಣ ಪಡೆಯುವ ಹಕ್ಕು ಮತ್ತು ವ್ಯಕ್ತಿಗತ ಧಾರ್ಮಿಕ ಹಕ್ಕು ಇವೆರಡೂ ಸಂವಿಧಾನ ನೀಡಿರುವ ಹಕ್ಕುಗಳಾಗಿದ್ದು ಆಯ್ಕೆಯ ಪ್ರಶ್ನೆಯೇ ಅಪ್ರಸ್ತುತವಾಗಿದೆ. ಇವೆರಡಕ್ಕೂ ಅವಕಾಶ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರಕಾರ ಹಾಗೂ ಸಂಬಂಧಿತ ಇಲಾಖೆಗಳಿಗೆ ಇದೆ ಎಂದು ಎಸಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಹೇಳಿದರು.
ಅವರು ಬಿ.ಸಿ.ರೋಡಿನ ಮಿತ್ತಬೈಲು ಮದ್ರಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಹಿಜಾಬ್ (ಶಿರವಸ್ತ್ರ) ಸಾಂಪ್ರದಾಯಿಕವಾಗಿ ಪೂರ್ವ ಕಾಲದಿಂದಲೇ ಚಾಲ್ತಯಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಅದಕ್ಕೆ ಯಾವುದೇ ತಡೆ ನಿರ್ಬಂಧಗಳು ಇರಲಿಲ್ಲ. ಏಕಾಏಕಿ ಗೊಂದಲ ಸೃಷ್ಟಿಸಿ ವಿಧ್ಯಾರ್ಥಿನಿಯರನ್ನು ಶಾಲೆಯ ಆವರಣಕ್ಕೆ ಪ್ರವೇಶಿಸಲು ಬಿಡದೆ ಬೀದಿಪಾಲಾಗಿಸುವ ಪ್ರವೃತ್ತಿ ಅಮಾನವೀಯವಾಗಿದೆ. ಅದನ್ನು ಇಲ್ಲಿ ಎಲ್ಲ ಧರ್ಮದ ಜನರೂ ಕಟುವಾಗಿ ಖಂಡಿಸಿದ್ದಾರೆ. ಶಿರವಸ್ತ್ರದ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ತಡೆಯುವ, ಅವರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಅಜೆಂಡಾವನ್ನು ಸೋಲಿಸಲೇ ಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ.
ಶಿರವಸ್ತ್ರದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗಿದ್ದು ರಾಜಕೀಯ ಹಾಗೂ ಪೂರ್ವಗ್ರಹ ಆಲೋಚನೆಗಳನ್ನು ಬಿಟ್ಟು ಪರಿಹಾರ ಕಂಡೊಕೊಳ್ಳಲು ತಯಾರಾದರೆ ಸುಲಭವಾಗಿ ಪರಿಹರಿಸಬಹುದು. ಶಿರವಸ್ತ್ರದ ಕುರಿತು ಸ್ಪಷ್ಟವಾದ ಮಾಹಿತಿ ಕೊರತೆ, ಅಸ್ಪಸ್ಟತೆ, ಗೊಂದಲಗಳು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಸಮವಸ್ತ್ರದ ಅದೇ ಬಣ್ಣದಲ್ಲಿರುವ ಶಾಲಿನಿಂದ ತಲೆ ಕೂದಲು ಮಾತ್ರ ಕಾಣದಂತೆ ಮರೆಸಿಕೊಂಡರೂ ಶಿರವಸ್ತ್ರದ ಬೇಡಿಕೆ ಈಡೇರುತ್ತದೆ. ಇದರಿಂದ ಶಾಲೆಯ ಸಮವಸ್ತ್ರ ಸಂಹಿತೆಗೆ ಯಾವುದೇ ತೊಂದರೆಯಾಗುವುದಿಲ್ಲ.
ಶಾಲಾ ಕಾಲೇಜುಗಳು ರಾಜಕೀಯ ಗೊಂದಲಗಳಿಗೆ ವೇದಿಕೆಯಾಗುತ್ತಿರುವುದು ಖೇದಕರ. ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಬೇಕಾದ ವಿದ್ಯಾಲಯಗಳು ರಾಜಕೀಯ ಪಕ್ಷಗಳ ಕರ್ಮ ಭೂಮಿಯಂತೆ ಮಾರ್ಪಾಡಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಉತ್ತಮವಲ್ಲ.
ವಿದ್ಯಾಲಯಗಳನ್ನು ರಾಜಕೀಯ ಮುಕ್ತಗೊಳಿಸುವ ಕೆಲಸ ನಡೆಯಬೇಕಿದೆ. ದೇಶದ ಭವಿಷ್ಯದ ನಿರೀಕ್ಷೆಗಳಾದ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಶಾಂತಿಯುತ ಸ್ವಚ್ಚಂದ ವಾತಾವರಣ ಮತ್ತು ಮೂಲಭೂತ ಹಕ್ಕುಗಳು ಸಂರಕ್ಷಣೆ ಸರಕಾರದ ಜವಾಬ್ದಾರಿಯಾಗಿದ್ದು ಅದರ ಪಾಲನೆ ಆಗಬೇಕೆಂದು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಂ-ಇಯ್ಯತುಲ್ ಖುತಬಾದ ದ.ಕ.ಜಿಲ್ಲಾಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಮಾತನಾಡಿ ಹಿಂದೂ ಧರ್ಮದ ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಹಿಜಾಬ್ ವಿವಾದದಲ್ಲಿ ಸ್ವಾಮೀಜಿಗಳು ಮಧ್ಯೆ ಪ್ರವೇಶಿಸಿ ಹಿಜಾಬ್ ಬಗ್ಗೆ ಹಿಂದೂ ಸಂಘಟನೆಗಳಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಂಡರು. ಹಿಜಾಬ್ ಬಗ್ಗೆ ಇರುವ ತಪ್ಪು ಕಲ್ಪನೆಯಿಂದ ರಾಜಕೀಯ ಪ್ರೇರಿತವಾಗಿ ವಿವಾದಗಳು ಸೃಷ್ಠಿಯಾಗುತ್ತಿದೆ. ಇದು ವಿದ್ಯಾರ್ಥಿಗಳ ಮಧ್ಯೆ ಖಂದಕವನ್ನು ನಿರ್ಮಾನಣ ಮಾಡುವ ಪ್ರಯತ್ನ ಇದನ್ನು ವಿಫಲಗೊಳಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಯ್ಯಿದ್ ಹಬೀಬ್ ತಂಙಳ್, ಜಂ-ಇಯ್ಯತುಲ್ ಖುತಬ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಷೀದ್ ರಹ್ಮಾನಿ, ವರ್ಕಿಂಗ್ ಕಾರ್ಯದರ್ಶಿ, ಅಬ್ದುಲ್ ರಷೀದ್ ಯಮಾನಿ, ಕೆ.ಬಿ. ದಾರಿಮಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ತಾಜುದ್ದೀನ್ ರಹ್ಮಾನಿ, ಅಬ್ದುಲ್ ರಷೀದ್ ರಹ್ಮಾನಿ, ಇಸ್ಹಾಕ್ ಫೈಝಿ ಕುಕ್ಕಿಲ, ನಝೀರ್ ಅಝ್ಹರಿ, ಅಬ್ದುಲ್ ರಷೀದ್ ಯಮಾನಿ, ಅಬ್ಬಾಸ್ ದಾರಿಮಿ ಕೆಲಿಂಜ,ಇಸ್ಮಾಯಿಲ್ ಯಮಾನಿ, ಹನೀಪ್ ಧೂಮಳಿಕೆ, ಅಬ್ದುಲ್ ಹಕೀಂ ಪರ್ತಿಪ್ಪಾಡಿ ಮುಂತಾದವರು ಹಾಜರಿದ್ದರು.
No comments: